ಗಂಗಾವತಿ.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ವಲಸಗಿ ಕಾಂಗ್ರೆಸ್ ಸದಸ್ಯರಿಗೆ ಜನಾರ್ಧನರೆಡ್ಡಿ ಜೈ ಎಂದಿದ್ದು, ಕಮಲದಲ್ಲಿ ಕೈ ಅರಳಿದೆ ಎಂದು ಚರ್ಚೆ ಜೋರಾಗಿದ್ದು, ಬಿಜೆಪಿ ವಲಯದಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಸಂಭ್ರಮ ಮನೆ ಮಾಡಿದೆ.
ಸೋಮವಾರ ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಲ್ಲಿ ಬಿಜೆಪಿ 14, ವಲಸಿಗ ಕಾಂಗ್ರೆಸ್ಸಿನ 9, ಜೆಡಿಎಸ್ 2 ಮತ್ತು ಪಕ್ಷೇತರ 2 ಇಬ್ಬರು ಸೇರಿ ೨೭ ಜನ ಸದಸ್ಯರ ಸಂಖ್ಯಾಬಲ ಸೃಷ್ಟಿಯಾಗಿತ್ತು. ಕಳೆದ ಒಂದು ವಾರದಿಂದ ನಗರಸಭೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿತ್ತು. 14 ಮತ್ತು 2 ಇಬ್ಬರು ಪಕ್ಷೇತರರು 2 ಜೆಡಿಎಸ್ ಮತ್ತು ಒಬ್ಬ ಶಾಸಕರು ಸೇರಿ ಅಧಿಕೃತವಾಗಿ ಬಿಜೆಪಿಗೆ ೧೯ ಸ್ಥಾನದ ಸಂಖ್ಯಾಬಲ ವೃದ್ಧಿಯಾಗಿತ್ತು. ಇದರ ಜೊತೆ ವಿಧಾನಸಭೆ ಚುನಾವಣೆಯಲ್ಲಿ ಜನಾರ್ಧನರೆಡ್ಡಿಗೆ ಬೆಂಬಲಿಸಿ ಶಾಸಕರೊಂದಿಗೆ ಅಧಿಕೃತವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ೯ ಜನ ಸದಸ್ಯರು ಸಾತ್ ನೀಡಿದ್ದರು. ಹೀಗಾಗಿ ಹಿಂದುತ್ವದ ವಾತಾವರಣ ಹೊಂದಿರುವ ಗಂಗಾವತಿಯಲ್ಲಿ ಈ ಬಾರಿಯ ನಗರಸಭೆಯಲ್ಲಿ ಬಿಜೆಪಿ ಮೂಲದ ಸದಸ್ಯರೊಬ್ಬರು ಅಧ್ಯಕ್ಷರಾಗುವುದು ನಿಶ್ಚಿತ ಎಂಬ ವಾತಾವರಣ ಮನೆ ಮಾಡಿತ್ತು. ಮತ್ತು ಬಿಜೆಪಿ ಮುಖಂಡರು ಕೂಡಾ ಬಹುತೇಕ ಪಕ್ಷದ ಮೂಲ ಸದಸ್ಯರಿಗೆ ಅವಕಾಶ ದೊರೆಯಲಿದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದರು. ಈ ಕುರಿತು ಚುನಾವಣೆ ಉಸ್ತುವಾರಿಯಾಗಿದ್ದ ವಿಧಾನಸಭೆ ಸದಸ್ಯ ಎನ್,ರವಿಕುಮಾರರೊಂದಿಗೆ ಎಲ್ಲಾ ಮಾತುಕತೆಗಳು ನಡೆದು ಬಿಜೆಪಿಯಿಂದ ಎರಡು ಬಾರಿ ಸದಸ್ಯರಾಗಿದ್ದ ಪರಶುರಾಮ ಮಡ್ಡೇರ್ ಅಥವಾ ಅಜಯ ಬಿಚ್ಚಾಲಿ ಅವಕಾಶ ಕಲ್ಪಿಸುವ ಮುನ್ಸೂಚನೆ ಇತ್ತು ಎಂಬ ಮಾತು ಕೇಳಿ ಬಂದಿತ್ತು. ಭಾನುವಾರ ರಾತ್ರಿ ಬೆಂಗಳೂರಿನಿಂದ ಆಗಮಿಸಿ ನಗರದ ಸಮಿಪವಿರುವ ಆನೆಗೊಂದಿ ಹತ್ತಿರದ ಖಾಸಗಿ ಹೊಟೇಲ್‌ನಲ್ಲಿ ಎಲ್ಲಾ ೨೭ ಸದಸ್ಯರೊಂದಿಗೆ ಹಾಲಿ, ಮಾಜಿ ಶಾಸಕರು, ಮಾಜಿ ಸಂಸದರು, ಬಿಜೆಪಿ ಮುಖಂಡರು ವಾಸ್ತವ್ಯ ಹೂಡಿದ್ದರು. ಆದರೆ ಆಯ್ಕೆ ಪ್ರಕ್ರೀಯೆ ನಡೆಯುವ ಸೋಮವಾರ ನಾಮಪತ್ರ ಸಲ್ಲಿಸುವ ೧೧ ಗಂಟೆ ಸಮಯದಲ್ಲಿ ಶಾಸಕ ಜನಾರ್ಧನರೆಡ್ಡಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದಿರುವ ಮೌಲಾಸಾಬ್‌ಗೆ ಅಧ್ಯಕ್ಷ ಮತ್ತು ಪಾರ್ವತಮ್ಮ ದೊಡ್ಡಮನಿ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೂಚಿಸುತ್ತಿದ್ದಂತೆ ನೇರವಾಗಿ ಆಗಮಿಸಿದ ಮೌಲಾಸಾಬ್ ಮತ್ತು ಪಾರ್ವತಮ್ಮ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ದಿಡೀರ್ ಬದಲಾವಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಗುಸು ಗುಸು ಶುರವಾಯಿತು. ತಮ್ಮ ಪಕ್ಷದ ಮೂಲ ಸದಸ್ಯರೊಬ್ಬರು ಈ ಬಾರಿ ಅಧ್ಯಕ್ಷರಾಗುತ್ತಾರೆ ಎಂಬ ಉತ್ಸಾಹದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಮೌಲಾಸಾಬ್ ಆಯ್ಕೆ ಶಾಖ್ ನೀಡಿತ್ತು. ಮತ್ತು ಕೆಲವು ಕಾರ್ಯಕರ್ತರು ಬಹಿರಂಗವಾಗಿ ಶಾಸಕರು ಮತ್ತು ಬಿಜೆಪಿ ಮುಖಂಡರು ತೆಗೆದುಕೊಂಡಿದ್ದ ನಿರ್ಧಾರವನ್ನು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತ ಅಧಿಕಾರ ದೊರೆಯುವುದಿಲ್ಲ ಎಂಬುದನ್ನು ಅರಿತಿದ್ದ ಕಾಂಗ್ರೆಸ್ ಸದಸ್ಯರು ಸಾಂಕೇತವಾಗಿ ಖಾಸಿಂಸಾಬ್ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿತ್ತು. ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ನೇರವಾಗಿ ಅಧಿಕಾರ ದೊರೆಯದಿದ್ದರೂ ತಮ್ಮ ಪಕ್ಷದ ಚಿಹ್ನೆಯಿಂದ ಆಯ್ಕೆಯಾಗಿರುವ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಲಭಿಸಿದೆ ಎಂದು ಆಂತರಿಕವಾಗಿ ಸಂಭ್ರಮ ವ್ಯಕ್ತಪಡಿಸಿ ಮನಸ್ಸಿನಲ್ಲೇ ತೃಪ್ತಿ ವ್ಯಕ್ತಪಡಿಸುತ್ತಿರುವುದು ವ್ಯಕ್ತವಾಗಿತ್ತು.
ಬಾಕ್ಸ್:
ಏಕಾಂಗಿಯಾಗಿ ನಿಂತ ಬಿಜೆಪಿ ಸದಸ್ಯ ಮಡ್ಡೇರ್
ಹಿಂದುಳಿದ ಅ ವರ್ಗಕ್ಕೆ ಮಿಸಲಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನ ಈ ಬಾರಿ ತಮಗೆ ಲಭಿಸುತ್ತದೆ ಎಂದು ಆಶಾಭಾವನೆ ಹೊಂದಿದ್ದ ಎರಡು ಬಾರಿ ಆಯ್ಕೆಯಾಗಿರುವ ಬಿಜೆಪಿ ಸದಸ್ಯ ಪರಶುರಾಮ ಮಡ್ಡೇರ್ ಚುನಾವಣೆ ಆಯ್ಕೆ ಪ್ರಕ್ರೀಯೆ ನಂತರ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಶಾಸಕರು, ಮುಖಂಡರು, ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಸಂಭ್ರಮಪಡುತ್ತಿದ್ದರೆ ಇತ್ತ ಪರಶುರಾಮ ಮಡ್ಚಡೇರ್ ಒಬ್ಬಂಟಿಯಾಗಿ ಮೌನವಾಗಿ ನಿಂತಿರುವ ದೃಶ್ಯ ಕಂಡು ಬಂತು. ಈ ಕುರಿತು ಮಾಧ್ಯಮಗಳ ಮಾತಿಗೆ ಉತ್ತರಿಸಿದ ಮಡ್ಡೇರ್ ಅವರು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಎಲ್ಲಾ ನಾಯಕರು ನನ್ನ ಹೆಸರು ಅಂತಿಮಗೊಳಿಸಿದ್ದರು. ಆದರೆ ಆಯ್ಕೆ ಪ್ರಕ್ರೀಯೆ ಕೊನೆ ಹಂತದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷದ ಸದಸ್ಯ ಮೌಲಾಸಾಬ್ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದರು. ಇದು ನನಗೂ ಸೇರಿದಂತೆ ನಮ್ಮ ಪಕ್ಷದ ಎಲ್ಲಾ ಸದಸ್ಯರಿಗೂ ಆಶ್ಚರ್ಯ ಮತ್ತು ಆತಂಕ ಮೂಡಿಸಿತ್ತು. ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ನಿರ್ಧಾರ ಬದಲಿಸಿರುವುದರಿಂದ ಸಹಜವಾಗಿ ನನಗೆ ಬೇಸರ ಮೂಡಿಸಿದೆ ಎಂದರು.