ಗಂಗಾವತಿ.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ವಲಸಿಗ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಎರಡು ಹುದ್ದೆಗಳನ್ನು ಬಿಟ್ಟುಕೊಟ್ಟಿರುವದು ಆಶ್ಚರ್ಯ ಮೂಡಿಸಿದೆ. 27 ಜನ ಸದಸ್ಯರು ಮತ್ತು ಶಾಸಕ ಜನಾರ್ಧನರೆಡ್ಡಿ ಸೇರಿ 28 ಮತಗಳಿಂದ ಕಾಂಗ್ರೆಸ್ ಪಕ್ಷದಿಂದ ಶಾಸಕ ಜನಾರ್ಧನರೆಡ್ಡಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ನಗರದ ೧೬ನೇ ವಾರ್ಡ್ ಸದಸ್ಯ ಮೌಲಾಸಾಬ್ ಅಧ್ಯಕ್ಷರಾಗಿ ಮತ್ತು 13ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಪಾರ್ವತಮ್ಮ ದುರಗೇಶ ದೊಡ್ಡಮನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಬೆಳಗ್ಗೆ ನಡೆದ ಆಯ್ಕೆ ಪ್ರಕ್ರೀಯೆ ನಂತರ ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅಧಿಕೃತವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು. ಹಿಂದುಳಿದ ಅ ವರ್ಗಕ್ಕೆ ಮಿಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮೌಲಾಸಾಬ್ ಮುದಗಲ್ ಮತ್ತು ಖಾಸಿಂಸಾಬ್ ಗದ್ವಾಲ್ ನಾಮಪತ್ರ ಸಲ್ಲಿಸಿದ್ದು, ಎಸ್‌ಸಿ ಮಹಿಳೆ ಸ್ಥಾನಕ್ಕೆ ಮಿಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ದುರಗೇಶ ದೊಡ್ಡಮನಿ ಮತ್ತು ಹುಲಿಗೆಮ್ಮ ಕಿರಿಕಿರಿ ನಾಮಪತ್ರ ಸಲ್ಲಿಸಿದ್ದರು. ನಾಲ್ಕು ಜನರ ನಾಮಪತ್ರ ಕ್ರಮಬದ್ಧವಾಗಿ ಕೈ ಎತ್ತಿಸುವ ಮೂಲಕ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಜನಾರ್ಧನರೆಡ್ಡಿ ಸೇರಿ ೨೮ ಮತ ಪಡೆದು ಮೌಲಾಸಾಬ್ ಅಧ್ಯಕ್ಷ ಮತ್ತು ಪಾರ್ವತಮ್ಮ ದುರಗೇಶ ದೊಡ್ಡಮನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ೮ ಮತಗಳನ್ನು ಪಡೆದ ಕಾಸಿಂಸಾಬ್ ಗದ್ವಾಲ್ ಮತ್ತು ಹುಲಿಗೆಮ್ಮ ಕಿರಿಕಿರಿ ಪರಾಭವಗೊಂಡಿದ್ದಾರೆ ಎಂದು ಅಧಿಕೃತವಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
೩೫ ಸದಸ್ಯ ಬಲದ ನಗರಸಭೆಯಲ್ಲಿ 17 ಜನ ಕಾಂಗ್ರೆಸ್ ಸದಸ್ಯರಲ್ಲಿ ೯ ಜನ ಸದಸ್ಯರು ಇಕ್ಬಾಲ್ ಅನ್ಸಾರಿಯಿಂದ ಮುನಿಸಿಕೊಂಡು ಹೊರ ಬಂದು ವಿಧಾನಸಭೆ ಚುನಾವಣೆಯಿಂದ ಶಾಸಕ ಜನಾರ್ಧನರೆಡ್ಡಯೊಂದಿಗೆ ಗುರುತಿಸಿಕೊಂಡಿದ್ದರಿಂದ 14 ಜನ ಬಿಜೆಪಿ, 2 ಪಕ್ಷೇತರರು ಮತ್ತು 2 ಜೆಡಿಎಸ್ ಸದಸ್ಯರು ಸೇರಿ ಬಿಜೆಪಿಗೆ ೨೭ ಸದಸ್ಯರ ಬೆಂಬಲ ವ್ಯಕ್ತವಾಗಿತ್ತು. ಮೊದಲ ಬಾರಿಗೆ ಬಿಜೆಪಿ ನಗರಸಭೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೂ ವಲಸಿಗ ಕಾಂಗ್ರೆಸ್ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದು, ಅಧಿಕೃತವಾಗಿ ಬಿಜೆಪಿಯಿಂದ ಆಯ್ಕೆಯಾಗಿರುವ ಸದಸ್ಯರಿಗೆ ಶಾಸಕರು ಸೇರಿ ಪಕ್ಷದ ಎಲ್ಲಾ ಮುಖಂಡರು ಕೈ ಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ.
ಆಯ್ಕೆ ಪ್ರಕ್ರೀಯೆ ನಂತರ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜನಾರ್ಧನರೆಡ್ಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ೯ ಜನ ಕಾಂಗ್ರೆಸ್ ಸದಸ್ಯರು ನನ್ನ ಬೆಂಬಲಕ್ಕೆ ನಿಂತಿದ್ದರು. ಮತ್ತು ನಾನು ಬಿಜೆಪಿಗೆ ವಾಪಸ್ಸಾದ ನಂತರವೂ ಅವರೆಲ್ಲರೂ ನನ್ನೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಅವರೆಲ್ಲರೂ ಅಂದಿನಿಂದ ಬಿಜೆಪಿಯಲ್ಲೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಯ ಎಲ್ಲಾ ಮುಖಂಡರೊಂದಿಗೆ ಮತ್ತು ಸದಸ್ಯರೊಂದಿಗೆ ಚರ್ಚಿಸಿ ಮೌಲಾಸಾಬ್‌ಗೆ ಅಧ್ಯಕ್ಷ ಮತ್ತು ಪಾರ್ವತಮಕ್ಕೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಗಂಗಾವತಿಯಲ್ಲಿ ಜಾತಿ, ಧರ್ಮ, ಮತಗಳನ್ನು ಮೀರಿ ರಾಜಕಾರಣ ಮಾಡುವ ಅವಶ್ಯಕತೆ ಇದೆ. ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊಡೆದು ಹಾಕಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಪಕ್ಷದ ೨೭ ಸದಸ್ಯರ ಸರ್ವ ಸಮ್ಮತ ಅಭ್ಯರ್ಥಿಯಾಗಿ ಇರ್ವರನ್ನು ಆಯ್ಕೆ ಮಾಡಿದ್ದೇವೆ. ಈ ಆಯ್ಕೆಯಲ್ಲಿ ಯಾರಿಗೂ ಅಸಮಾಧಾನವಿಲ್ಲ ಎಂದು ಜನಾರ್ಧನರೆಡ್ಡಿ ಸ್ಪಷ್ಟಪಡಿಸಿದರು.
ನಂತರ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮೌಲಾಸಾಬ್ ಮತ್ತು ಪಾರ್ವತಮ್ಮ ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರೂ ಈಗ ಅಧಿಕೃತವಾಗಿ ಶಾಸಕರೊಂದಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿ ಬೆಂಬಲದಿಂದ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆಪೇಕ್ಷತೆಯಲ್ಲಿ ಅಸಮಾಧಾನ ಸಹಜವಾಗಿರುತ್ತದೆ. ಎಲ್ಲವನ್ನು ಸರಿಪಡಿಸಿಕೊಂಡು ನಗರದ ಅಭಿವೃದ್ಧಿಗೆ ವಿಶೇಷ ಅದ್ಯತೆ ನೀಡಲಾಗುವುದು ಎಂದರು.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ ನಿರೀಕ್ಷೆಯಂತೆ ನಮ್ಮ ಬಿಜೆಪಿ ಪಕ್ಷದಿಂದ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ. ಜನರ ನಿರೀಕ್ಷೆಯಂತೆ ಶಾಸಕರ ನೇತೃತ್ವದಲ್ಲಿ ಗಂಗಾವತಿಯ ಅಭಿವೃದ್ಧಿಗೆ ಬಿಜೆಪಿ ಆಡಳಿತ ಮಂಡಳಿ ಶ್ರಮಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ೨೭ಜನ ಬಿಜೆಪಿ ಸದಸ್ಯರು ಸೇರಿದಂತೆ ಬಿಜೆಪಿ ಅಧ್ಯಕ್ಷರಾದ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಮುಖಂಡರಾದ ಡಾ|| ಬಸವರಾಜ, ಹೆಚ್.ಗಿರೇಗೌಡ, ಪಂಪಾಪತಿ ಸಿಂಗನಾಳ, ಸಂತೋಷ ಕೆಲೋಜಿ, ಮನೋಹರಗೌಡ ಹೇರೂರು, ದುರಗಪ್ಪ ಆಗೋಲಿ, ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ದುರಗೇಶ ದೊಡ್ಡಮನಿ, ಚಂದ್ರಶೇಖರ ಹಿರೂರು, ಹುಸೇನಪ್ಪಸ್ವಾಮಿ, ರಾಜೇಶ್ವರಿ ಸುರೇಶ, ಭಾರತಿ ಆಗಲೂರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದಿಸಿ ಬಿಜೆಪಿ ಮೊದಲ ಬಾರಿಗೆ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಾಕ್ಸ್:
ಹಿಂದು-ಮುಸ್ಲಿಂ ಬಾಯಿ ಬಾಯಿ ಭಾರತೆ ಮಾತೆ ನಮ್ಮ ತಾಯಿ
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮೌಲಾಸಾಬ್ ಅವರನ್ನು ಆಯ್ಕೆ ಮಾಡಿರುವುದು ಗಂಗಾವತಿಯ ಬಿಜೆಪಿಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ವ ಜಾತಿ, ಧರ್ಮ, ಮತ, ಪಂತ ಮೀರಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೌಲಾಸಾಬ್ ಅವರು ಅಧ್ಯಕ್ಷ ಮೌಲಾಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಆಯ್ಕೆಯಾಗಿದ್ದರೂ ಕಳೆದ ವಿಧಾನಸಭೆ ಚುನಾವಣೆಯಿಂದ ನಮ್ಮೊಂದಿಗೆ ಇದ್ದಾರೆ. ನನ್ನೊಂದಿಗೆ ಅವರು ಕೂಡಾ ಬಿಜೆಪಿ ಸೇರ್ಪಡೆಯಾಗಿ ಅಂದಿನಿಂದ ಬಿಜೆಪಿಯಲ್ಲೆ ಗುರುತಿಸಿಕೊಂಡಿದ್ದಾರೆ. ೧೭ ಜನ ಕಾಂಗ್ರೆಸ್ ಸದಸ್ಯರ ಪೈಕಿ ೯ ಜನ ಸದಸ್ಯರು ನಮ್ಮ ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಪಕ್ಷಾಂತರ ಕಾಯ್ಕೆ ಅನ್ವಯವಾಗುವುದಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರು ಒಟ್ಟುಗೂಡಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಹಿಂದು-ಮುಸ್ಲಿಂ ಬಾಯಿ ಬಾಯಿ ಭಾರತ ಮಾತೆ ನಮ್ಮೆಲ್ಲರ ತಾಯಿ ಎಂದು ನಾನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದು, ಗಂಗಾವತಿಯಲ್ಲಿ ಮೌಲಾಸಾಬ್ ಅಧ್ಯಕ್ಷರನ್ನಾಗಿ ಮಾಡಿ ಬಿಜೆಪಿ ಎಲ್ಲರ ವಿಕಾಸಕ್ಕೆ ಕೆಲಸ ಮಾಡುತ್ತದೆ ಎಂದು ತೊರಿಸಿದ್ದೇವೆ.
ಗಾಲಿ ಜನಾರ್ಧನರೆಡ್ಡಿ, ಶಾಸಕರು, ಗಂಗಾವತಿ.