ಗಂಗಾವತಿ.
ಶಾಸಕ ಗಾಲಿ ಜನಾರ್ಧನರೆಡ್ಡಿ ನೇತೃತ್ವದಲ್ಲಿ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆರಿ ಕಾಂಗ್ರೆಸ್ ಪಕ್ಷದ ವಲಸಿಗ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ನಗರಸಭೆಯಲ್ಲಿ ಬಿಜೆಪಿ ಅಧಿಕೃತ ಆಡಳಿತ ಪಕ್ಷವಾಗಿ ಹೊರ ಹೊಮ್ಮಿದೆ. ಅಧ್ಯಕ್ಷ, ಉಪಾಧ್ಯಕ್ಷರು ಸಹ ಬಿಜೆಪಿಯಿಂದ ನಾವು ಅಧಿಕಾರ ಪಡೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿರುವವರು ಕಾಂಗ್ರೆಸ್ ಚಿಹ್ನೆಯಿಂದ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಂತಾಗಿದೆ. ಇದು ನನ್ನ ರಾಜಕೀಯ ರಾಜತಂತ್ರ ಎಂದು ಆಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಆದರೆ ಇಂದು ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅನ್ಸಾರಿ ಬೆಂಬಲಿಗ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ಅಧಿಕೃತವಾಗಿ ವಿರೋಧ ಪಕ್ಷದ ನಾಯಕರಾಗಿರುವುದು ಆಶ್ಚರ್ಯ ಮೂಡಿಸಿದೆ.
ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿಗ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ತಮ್ಮ ಪಕ್ಷದ ಸದಸ್ಯರಾದ ಖಾಸಿಂಸಾಬ್ ಗದ್ವಾಲ್, ಎಫ್.ರಾಘವೇಂದ್ರ, ಸುನಿತಾ ಶ್ಯಾವಿ, ಹುಲಿಗೇಮ್ಮ ಕಿರಿ ಕಿರಿ ಅವರೊಂದಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಅಧ್ಯಕ್ಷ ಮೌಲಾಸಾಬ್ ಶಾಸಕ ಜನಾರ್ಧನರೆಡ್ಡಿ ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಮನೋಹರಸ್ವಾಮಿ ನಗರಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಘೋಷಣೆ ಮಾಡಿದರು. ನಂತರ ಮಾತನಾಡಿದ ಮನೋಹರಸ್ವಾಮಿ ನಗರಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದಿಂದ ಎಲ್ಲ ಸದಸ್ಯರ ಸಹಕಾರದಿಂದ ನನಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರು ಅಭಿವೃದ್ಧಿಪರ ಕೆಲಸಕ್ಕೆ ಸದಾ ಬೆಂಬಲಿಸುತ್ತಾರೆ ಎಂದು ನಗರದ ಅಭಿವೃದ್ಧಿ ಕುರಿತು ಹಲವು ವಿಷಯಗಳನ್ನು ಚರ್ಚಿಸಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ಪೌರಾಯುಕ್ತ ವಿರುಪಾಕ್ಷಮೂರ್ತಿ ಸೇರಿದಂತೆ ಸರ್ವ ಸದಸ್ಯರು ಇದ್ದರು.
