ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತ ಇಂದು ದೇಶ, ವಿದೇಶಗಳಲ್ಲಿ ಗಮನ ಸೇಳೆಯುತ್ತಿದೆ. ಅಂಜನಾಧ್ರಿ ಪರ್ವತಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಇಂತಹ ಪುಣ್ಯ ಕ್ಷೇತ್ರಕ್ಕೆ ಭಕ್ತರು ಗಂಗಾವತಿ ನಗರದ ಮೂಲಕ ಬರುವಂತೆ ವ್ಯವಸ್ಥೆ ಸೃಷ್ಟಿಸಬೇಕು. ಇದರಿಂದ ಗಂಗಾವತಿ ನಗರ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ. ಅಂಜನಾದ್ರಿಗೆ ಪೂರಕವಾಗಲಿರುವ ಗಂಗಾವತಿ ನಗರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕ ಜನಾರ್ಧನರೆಡ್ಡಿ ಅವರು ಕೈಗೊಂಡಿರುವ ವಿದ್ಯುತ್ ಕಂಬಗಳ ಅಲಂಕಾರ ಅತ್ಯಂತ ಸಮಂಜಸವಾಗಿದೆ. ಈ ವಿಷಯದಲ್ಲಿ ಧಾರ್ಮಿಕ ಬೇಧ, ಭಾವ ಮಾಡಿ ಅನವಶ್ಯಕ ಗೊಂದಲ ಸೃಷ್ಟಿಸಬಾರದು. ತಹಶೀಲ್ದಾರರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಂಜನಾದ್ರಿ ಕ್ಷೇತ್ರದ ಮೂಲಕ ಗಂಗಾವತಿಯನ್ನು ಅಭಿವೃದ್ಧಿ ಪೂರಕವಾಗಿ ಮಾಡಬೇಕಾಗಿದೆ. ಮತ್ತು ಪ್ರವಾಸೋಧ್ಯಮ ಬೆಳವಣಿಗೆಯಾಗುವಂತೆ ಕೆಲಸ ಮಾಡಬೇಕಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಹಾಕಿರುವ ವಿದ್ಯುತ್ ಕಂಬಗಳ ವಿವಾದ ಹಿನ್ನೆಲೆ ಕುರಿತು ಅವರು ಸಮರ್ಥವಾಣಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗಂಗಾವತಿ ನಗರದ ಸಂಘ, ಸಂಸ್ಥೆಗಳ ಪದಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಹನುಮ ಹುಟ್ಟಿರುವ ಪುಣ್ಯ ಕ್ಷೇತ್ರ ಅಂಜನಾದ್ರಿ ತಡವಾಗಿ ಬೆಳಕಿಗೆ ಬಂದಿರುವುದು ದುರ್ದೈವದ ಸಂಗತಿಯಾಗಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅಯೋಧ್ಯಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ನಮ್ಮ ಜಿಲ್ಲೆಯ ಹೆಮ್ಮೆಯ ಪುಣ್ಯ ಕ್ಷೇತ್ರ ಅಂಜನಾದ್ರಿ ಕೂಡಾ ಅಭಿವೃದ್ಧಿಯಾಗಿ ತಿರುಪತಿ, ಅಯೋಧ್ಯಾ ಮಾದರಿಯಲ್ಲಿ ಭಕ್ತರು ದರ್ಶನಕ್ಕೆ ಬರುವಂತೆ ಯೋಜನೆ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಚಿಂತನೆ ನಡೆಸುತ್ತಿದ್ದಾರೆ. ಇದಕ್ಕೆ ಈ ಭಾಗದ ಸಮಸ್ಥ ಜನತೆಯೂ ಕೂಡಾ ಬೆಂಬಲವಾಗಿ ನಿಲ್ಲಬೇಕು. ಇತ್ತೀಚಿಗೆ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ನಗರದ ಜುಲೈನಗರ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಹಾಕಿರುವ ವಿದ್ಯುತ್ ಕಂಬಗಳ ಚಿತ್ರಗಳ ಬಗ್ಗೆ ಕೆಲವು ವ್ಯಕ್ತಿಗಳು ವಿರೋಧ ಮಾಡಿರುವುದನ್ನೆ ದೊಡ್ಡ ಸಂಗತಿ ಎಂದು ಭಾವಿಸಿ ತಹಶೀಲ್ದಾರರು ಕಂಬಗಳನ್ನು ತೆರವು ಮಾಡುವ ಆದೇಶ ಮಾಡಿ ಗಂಗಾವತಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಲು ಮುಂದಾಗಿದ್ದರು. ಈ ಸಂಗತಿ ಇಂದು ಸ್ಥಳೀಯ ಸೇರಿದಂತೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲು ದೊಡ್ಡ ಚರ್ಚೆಯಾಗುತ್ತಿದೆ. ಅಧಿಕಾರಿಗಳು ಯಾವುದೇ ಪೂರ್ವಾಪರ ಯೋಚನೆ ಮಾಡದೇ ಮತ್ತು ಹಿಂದೆ ಆಗಿರುವ ಘಟನೆಗಳನ್ನು ಅರಿತುಕೊಳ್ಳದೇ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಕೇವಲ ಗಂಗಾವತಿಯಷ್ಟೇ ಅಲ್ಲ ರಾಜ್ಯ ಮತ್ತು ದೇಶದ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಈಗ ಎಲ್ಲರ ಅನುಭವಕ್ಕೂ ಬರುತ್ತದೆ. ಅಭಿವೃದ್ಧಿ ಸಮಯದಲ್ಲಿ ಕೆಲವು ಸಮಸ್ಯೆಗಳು ಎದಾರದರೆ ಕೇವಲ ತಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡದೇ ಅಧಿಕಾರಿಗಳು ಶಾಸಕರು, ಸಂಸದರು, ಸರ್ವ ಪಕ್ಷದ ಮುಖಂಡರು, ಪ್ರಜ್ಞಾವಂತಹ ನಾಗರಿಕರೊಂದಿಗೆ ಸಾಧಕ, ಬಾಧಕಗಳನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ರಾಘವೇಂದ್ರಶೆಟ್ಟಿ ಸಲಹೆ ನೀಡಿದ್ದಾರೆ.
ಮುಂದುವರೆದು ಮಾತನಾಡಿರುವ ರಾಘವೇಂದ್ರಶೆಟ್ಟಿ ಅವರು ಅಂಜನಾಧ್ರಿ ಪರ್ವತದ ಅಭಿವೃದ್ಧಿಗೆ ಹಿಂದಿನ ಮತ್ತು ಈಗ ಇರುವ ರಾಜ್ಯ ಸರಕಾರ ಈಗಾಗಲೇ ರೂ.೨೦೦ ಕೋಟಿ ಅನುದಾನ ನೀಡಿದೆ. ಶಾಸಕರು ಕೂಡಾ ಅಂಜನಾದ್ರಿಯನ್ನು ವೈಭವಯುತವಾಗಿ ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ. ಸರಕಾರದ ಅನುದಾನ ಬರುವಲ್ಲಿ ಕೆಲವು ಸಮಯ ವಿಳಂಬವಾಗಬಹುದು. ಬರುವ ಅನುದಾನದಲ್ಲಿ ಕೆಲವು ಕಾಮಗಾರಿಗಳು ನಡೆಸಲಾಗುತ್ತದೆ. ಅಂಜನಾದ್ರಿ ಪರ್ವತದ ಅಭಿವೃದ್ಧಿಯಿಂದ ಗಂಗಾವತಿ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿಗೆ ಹೊಟೇಲ್, ಅಂಗಡಿ ಸೇರಿದಂತೆ ಹತ್ತಾರು ರೀತಿಯ ಉದ್ಯೋಗ ಸೃಷ್ಟಿಸಿಕೊಳ್ಳುವ ಅವಕಾಶ ಲಭಿಸುತ್ತವೆ. ವಿಶೇಷವಾಗಿ ಅಂಜನಾದ್ರಿ ಕ್ಷೇತ್ರಕ್ಕೆ ಗಂಗಾವತಿ ನಗರ ಪ್ರಮುಖ ಕೇಂದ್ರ ಸ್ಥಾನವನ್ನಾಗಿ ಮಾಡುವ ಜವಬ್ದಾರಿ ಎಲ್ಲರ ಮೇಲಿದೆ. ಇದರಿಂದ ಗಂಗಾವತಿ ನಗರ ರಸ್ತೆ, ವಿದ್ಯುತ್, ಇನ್ನಿತರ ಮೂಲ ಸೌಕರ್ಯ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ. ಅಂಜನಾದ್ರಿ ಎಂದರೆ ಅದು ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ ಹಿಂದೂಗಳಷ್ಟೇ ಅಲ್ಲ ಸರ್ವ ಧರ್ಮಗಳ ಜನರು ಅಂಜನಾದ್ರಿಗೆ ಬರುತ್ತಿದ್ದಾರೆ. ಜೊತೆಗೆ ದೇಶ, ವಿದೇಶಗಳಿಂದಲೂ ಜನರು ಬಂದು ದರ್ಶನ ಪಡೆಯುತ್ತಿದ್ದಾರೆ. ಅಂಜನಾದ್ರಿ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಂಗ್ರಹವಾಗುತ್ತಿರುವುದು ನಮಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ಥಾನದ ಕರೆನ್ಸಿ ಕೂಡಾ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಪಾಕಿಸ್ಥಾನ ಪ್ರಜೆಯೂ ಕೂಡಾ ಅಂಜನಾದ್ರಿಯಲ್ಲಿ ಭಕ್ತಿಯಿಂದ ದರ್ಶನ ಪಡೆದಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಈ ಎಲ್ಲಾ ಸಂಗತಿಗಳನ್ನು ಮನಗಂಡು ಮತ್ತು ಪ್ರವಾಸೋಧ್ಯಮ ಅಭಿವೃದ್ಧಿಗೆ ಪೂರಕವಾಗುವಂತಹ ವಾತಾವರಣ ನಿರ್ಮಾಣವಾಗುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳ ಮನವಿಯನ್ನು ಪುರಸ್ಕರಿಸಿ ಅನವಶ್ಯಕ ನಿರ್ಧಾರಗಳನ್ನು ಕೈಗೊಂಡು ಯಾವುದೇ ಯಡವಟ್ಟಿಗೆ ಗುರಿಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಮತ್ತು ಸರ್ವರು ಅಭಿವೃದ್ಧಿ ಚಿಂತನೆ ಹೊಂದಬೇಕು ಎಂದು ರಾಘವೇಂದ್ರಶೆಟ್ಟಿ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!