ಗಂಗಾವತಿ.
2025ರ ಹೊಸ ವರ್ಷವನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಇಂದು ರಾತ್ರಿ ಕೆಲವೆಡೆ ನಡೆಯುವ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಕಡೆಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ. ಮತ್ತು ಸಂಭ್ರಮಾಚರಣೆ ನೆಪದಲ್ಲಿ ನಡೆಸುವ ಕಾರ್ಯಕ್ರಮಗಳನ್ನು ರಾತ್ರಿ 11 ಗಂಟೆಗೆ ಮುಕ್ತಾಯಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್ ತಿಳಿಸಿದರು.
ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗಂಗಾವತಿ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಮತ್ತು ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೆಸ್ಟೋರೆಂಟ್, ಹೊಟೇಲ್, ಲಾಡ್ಜ್, ಹೊಂ ಸ್ಟೇಗಳ ಮಾಲೀಕರಿಗೆ ಸೂಚನೆ ನೀಡಿದ್ದು, ರಾತ್ರಿ 11 ಗಂಟೆಯ ನಂತರ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ. ಮತ್ತು ಯಾವುದೇ ಸಂಗೀತ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಹಾಕುವುದಕ್ಕೆ ಅವಕಾಶ ನೀಡಿಲ್ಲ. ಕೆಲವೊಂದು ರೆಸ್ಟೋರೆಂಟ್‌ಗಳಲ್ಲಿ ಫ್ಯಾಮೀಲಿ ಮತ್ತು ಮಕ್ಕಳಿಗಾಗಿ ಶೋ, ಡ್ಯಾನ್ಸ್ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಯಾವುದೇ ಚಟುವಟಿಕೆ ನಡೆಸಿದರೂ ರಾತ್ರಿ 11 ಗಂಟೆಗೆ ಮುಕ್ತಾಯಗೊಳಿಸಬೇಕು.    ರಸ್ತೆ, ಮೈದಾನ, ಶಾಲಾ ಆವರಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ ಅವಕಾಶ ನೀಡಿಲ್ಲ.  ಕೆಲವು ಖಾಸಗಿ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ನಿಯಮಾನುಸಾರ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಿದ್ದೇವೆ.   ಮತ್ತು ಸಂಭ್ರಮಾಚರಣೆ ನೆಪದಲ್ಲಿ ಯಾವುದೇ ಅಹಿಕತರ ಘಟನೆ ನಡೆದರೆ ಅದಕ್ಕೆ ಸಂಬಂಧಿಸಿದ ರೆಸ್ಟೋರೆಂಟ್, ಹೊಟೇಲ್ ಮಾಲೀಕರನ್ನೇ ಹೊಣೆ ಮಾಡಲಾಗುತ್ತದೆ. ವಿಶೇಷವಾಗಿ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಎಲ್ಲಾ ಕಡೆಗಳಲ್ಲಿ ಕಟ್ಟೆಚ್ಚರ ವಿಧಿಸಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ಸಂಗಾಪುರ ಕೆರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮೂರು ಜನರನ್ನು ಬಂಧಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದರು. ನಗರ ಠಾಣೆ ಪಿಐ ಪ್ರಕಾಶ ಮಾಳೆ ಇದ್ದರು.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!