ಕಾರಟಗಿ.
ನನ್ನ ಸ್ವಗ್ರಾಮದಲ್ಲಿ ನಾನು ಕಷ್ಟಪಟ್ಟು ನದಿಯಿಂದ ಪೈಪ್‌ಲೈನ್ ಮೂಲಕ ನೀರಾವರಿ ಮಾಡಿ ಎಲ್ಲಾ ರೈತರ ಭೂಮಿಗೆ ನೀರು ಒದಗಿಸುವ ಕೆಲಸ ಮಾಡಿದ್ದೇನೆ. ದೇವದಾಸಿಯರ ಭೂಮಿಯನ್ನು ನಾನು ಕಬಳಿಕೆ ಮಾಡಿದ್ದೇನೆ ಎಂಬ ಆರೋಪ ಹೊರಿಸಿ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆ ದಾಖಲಾಗಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಚೋದನೆ ಪ್ರಮುಖ ಕಾರಣವಾಗಿದೆ. ಸಚಿವ ತಂಗಡಗಿಗೆ ಅಧಿಕಾರ ದಾಹ ಹೆಚ್ಚಾಗಿದೆ. ಅವರಿಗೆ ಅಧಿಕಾರ ಶಾಸ್ವತವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸಗೂರು ಹೇಳಿದರು.
ಭಾನುವಾರ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ದಢೇಸಗೂರು ಗ್ರಾಮದ ವ್ಯಾಪ್ತಿಯಲ್ಲಿ ನಾನು ಯಾವುದೇ ದೇವದಾಸಿಯರ ಭೂಮಿಯನ್ನು ಕಬ್ಜ ಮಾಡಿಲ್ಲ. ಇದುವರೆಗೂ ಎಲ್ಲಾ ಭೂಮಿ ಅವರ ಹೆಸರಿನಲ್ಲಿದೆ. ನಾನು ಯಾರ ಮೇಲೂ ದೌರ್ಜನ್ಯ ಮಾಡಿಲ್ಲ. ಅಲ್ಲಿನ ಜನರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡುವ ಕೆಲಸ ಮಾಡಿದ್ದೇನೆ. ಇಂದಿಗೂ ಅಲ್ಲಿನ ರೈತರು ನಾನು ಮಾಡಿರುವ ಕಾರ್ಯದಿಂದ ಸಮೃದ್ಧವಾದ ಬೆಳೆ ಬೆಳೆದುಕೊಳ್ಳುತ್ತಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ೧೭ದೇವಾದಾಸಿಯರಿಗೆ ತಲಾ ಒಬ್ಬರಿಗೆ ಮೂರು ಎಕರೆ ಜಮೀನನ್ನು ಸರ್ವೆ ನಂಬರ್ ೮೧ರಲ್ಲಿ ನೀಡಲಾಗಿತ್ತು. ಈ ಜಮೀನನ್ನು ನೀರಾವರಿ ಮಾಡಲು ೫೦:೫೦ ಅನುಪಾತದಲ್ಲಿ ನೀರಾವರಿ ಜಮೀನು ಮಾಡಲಾಯಿತು. ಆಗ ಅವರಿಗೆ ಒಬ್ಬರಿಗೆ ಒಂದೂವರೆ ಎಕರೆ ಜಮೀನು ಪಡೆದು ತುಂಗಭದ್ರಾ ನದಿಯಿಂದ ಅಂದರೆ ಸುಮಾರು ಐದಾರು ಕಿಮೀ ನಷ್ಟು ದೂರದಿಂದ ನೀರು ಕೊಡಲಾಗಿದೆ. ಯಾರೇ ನೀರಾವರಿ ಮಾಡಿ ಕೊಟ್ಟರೆ, ೫೦:೫೦ಅನುಪಾತದಲ್ಲಿ ಹೊಂದಾಣಿಕೆ ಮಾಡಿಕೊಂಡು ಜಮೀನು ಪಡೆದುಕೊಳ್ಳಲಾಗುತ್ತದೆ. ಇಸ್ಸಾ ದಾಖಲೆಯಲ್ಲಿ ದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಇಸಾ ಸರಿಯಾದರೆ ಎಲ್ಲವು ಸರಿಯಾಗುತ್ತದೆ. ಭೂಮಿ ದಾಖಲೆ ವಿಷಯದಲ್ಲಿ ನನ್ನೊಂದಿಗೆ ಕೆಲವರು ವಿವಾದ ಮಾಡಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಸಚಿವ ತಂಗಡಗಿ ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗುತ್ತಿದ್ದಂತೆ ನನ್ನ ಮೇಲೆ ಗುರುತರವಾದ ಅಪವಾದ ಹೊರಿಸುವ ಕಾರಣದಿಂದ ಅವರಿಗೆ ಪ್ರಚೋದನೆ ನೀಡಿ ನನ್ನ ಮೇಲೆ ದೂರು ದಾಖಲಾಗುವಂತೆ ಮಾಡಿದ್ದಾರೆ. ಸಚಿವ ಶಿವರಾಜ ತಂಗಡಗಿ ರಾಜಕೀಯವಾಗಿ ನನ್ನನ್ನು ಹೆದರಿಸುವ ಕೆಲಸ ಮಾಡಲಿ. ಆದರೆ ಇನ್ನೊಬ್ಬರಿಗೆ ಪ್ರಚೋದನೆ ನೀಡಿ ಸುಳ್ಳು ಮೊಕದ್ದಮೆ ದಾಖಲು ಮಾಡಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಅಧಿಕಾರ ಯಾರಿಗೂ ಶಾಸ್ವತವಲ್ಲ ಎಂಬುದು ಅವರು ತಿಳಿದುಕೊಳ್ಳಬೇಕು ಎಂದು ಸಚಿವ ತಂಗಡಗಿ ವಿರುದ್ಧ ದಢೇಸಗೂರು ಹರಿಹಾಯ್ದರು.
ಮುಂದುವರೆದು ಮಾತನಾಡಿದ ಅವರು ಬಿಎಸ್‌ಸಿ ಪದವಿಧರನಾಗಿದ್ದೇನೆ. ಪುಸ್ತಕ ಬರೆಯುವಷ್ಟು ಬುದ್ಧಿವಂತನಾಗಿದ್ದೇನೆ ಎಂದು ಜಂಬ ಕೊಚ್ಚಿಕೊಳ್ಳುವ ಸಚಿವ ಶಿವರಾಜ ತಂಗಡಗಿ ಅಂಗನವಾಡಿ ಶಾಲೆಯ ಮಕ್ಕಳ ಮುಂದೆ ಕನ್ನಡ ಪದವನ್ನು ತಪ್ಪಾಗಿ ಬರೆದು ಜನರ ಮುಂದೆ ಅಪಹಾಸ್ಯಕ್ಕಿಡಾಗಿದ್ದಾರೆ. ಅವರು ಎಷ್ಟು ಬುದ್ಧಿವಂತರು ಎಂಬುದು ಅವರೇ ಜನರಿಗೆ ತೊರಿಸಿಕೊಟ್ಟಿದ್ದಾರೆ. ನನಗೆ ದಡ್ಡ, ಅನಕ್ಷರಸ್ಥ, ಮಾತನಾಡಲು ಬರುವುದಿಲ್ಲ, ಶಾಲಿ ಕಲಿತಿಲ್ಲ ಎಂದು ಜನರ ಮುಂದೆ ವ್ಯಂಗ್ಯ ಮಾಡುವ ಶಿವರಾಜ ತಂಗಡಗಿ ಪದವಿ ಓದಿದ್ದರೂ ತಾನು ಎಷ್ಟು ದಡ್ಡ ಎಂಬುದನ್ನು ತಾವೆ ತೊರಿಸಿಕೊಟ್ಟಿದ್ದಾರೆ. ಅವರು ತಪ್ಪಾಗಿ ಬರೆದಿರುವುದನ್ನು ನಾವು ಯಾರು ಬೆಟ್ಟು ಮಾಡಿ ತೊರಿಸಿಲ್ಲ. ಜನರೇ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ ಎಂದು ಕುಟಿಕಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಮೂರನೇ ಬಾರಿಗೂ ಒಂದು ಕ್ಷೇತ್ರವನ್ನು ಗೆದ್ದುಕೊಂಡಿಲ್ಲ. ತಮ್ಮ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹೇಗಾಗಿದೆ ಎಂಬುದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನೊಡಬೇಕು. ದೆಹಲಿಯ ಜನ ಕಾಂಗ್ರೆಸ್ ಪಕ್ಷದ ನಾಯಕರಿಗೆ ಯಾವ ರೀತಿ ಬುದ್ದಿ ಕಲಿಸಿದ್ದಾರೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಸರಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಬಿಜೆಪಿ ಪಕ್ಷದಲ್ಲಿ ನಾಯಕರ ನಡುವೆ ಕೆಲವು ವೈಮನಸ್ಸು ಇರಬಹುದು. ಆದರೆ ಪಕ್ಷದಲ್ಲಿ ಭಿನ್ನಮತವಿಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಕಾರ್ಯಕರ್ತರಿಂದ ನಾಯಕರು ಸೃಷ್ಟಿಯಾಗುತ್ತಾರೆ. ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ನಮ್ಮ ಪಕ್ಷದ ಎಲ್ಲಾ ವಿದ್ಯಾಮಾನಗಳನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದು ದಢೇಸೂಗೂರ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮುಖಂಡ ಜಿ.ತಿಮ್ಮಾನಗೌಡ, ದುರ್ಗಾರಾವ್, ಕಾಶಿವಿಶ್ವನಾಥ ಬಿಚ್ಚಾಲಿ, ಚಂದ್ರಶೇಖರ ಬೆನ್ನೂರು ಮತ್ತಿತರು ಇದ್ದರು.
ಬಾಕ್ಸ್:
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನಿಶ್ಚಿತ
ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗುತ್ತಿದ್ದಂತೆ ಸಚಿವ ಶಿವರಾಜ ತಂಗಡಗಿ ನನ್ನ ಮೇಲೆ ಕೆಟ್ಟ ಹೆಸರು ತರುವ ಉದ್ದೇಶದಿಂದ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲು ಮಾಡುವಂತೆ ಕೆಲವರಿಗ ಪ್ರಚೋದನೆ ನೀಡಿದ್ದಾರೆ. ಇದನ್ನು ನಾನು ಕಾನೂನಾತ್ಮಕವಾಗಿ ಹೆದರಿಸುತ್ತೇನೆ. ಆದರೆ ಹಿರಿಯರು ಮತ್ತು ಜಿಲ್ಲೆಯ ಎಲ್ಲಾ ಕಾರ್ಯಕರ್ತರು ನನ್ನ ಮೇಲೆ ವಿಶ್ವಾಸವಿಟ್ಟು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ಇದಕ್ಕೆ ಚುತಿ ಬರದಂತೆ ನಾನು ಪ್ರಮಾಣಿಕವಾಗಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರುವಂತೆ ನಾನು ಪಕ್ಷ ಸಂಘಟನೆ ಮಾಡುವುದು ನಿಶ್ಚಿತ.
ಬಸವರಾಜ ದಢೇಸೂಗೂರು, ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!