ಗಂಗಾವತಿ.
ಸರಕಾರದ ಸಂಬಳ ಪಡೆದು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಅನಾರೋಗ್ಯ ಎಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿ ಕರ್ತವ್ಯಕ್ಕೆ ಚೆಕ್ಕರ್ ಹಾಕಿರುವ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಪ್ರಯಾಗರಾಜ್ ಮತ್ತಿತರ ತೀರ್ಥ ಕ್ಷೇತ್ರಗಳಿಗೆ ತೆರಳಿ ಭರ್ಜರಿ ಪ್ರವಾಸ ಮಾಡುತ್ತಾ ತಾಪಂ ಅಧಿಕಾರಿಗಳಿಗೆ ಸುಳ್ಳು ಹೇಳಿ ಯಾಮಾರಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ಐದಾರು ವರ್ಷಗಳಿಂದ ತಾಲೂಕಿನ ಆನೆಗೊಂದಿ ಗ್ರಾಪಂನಲ್ಲಿ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣಪ್ಪ ಕೆಲಸದಲ್ಲಿ ಶ್ರದ್ಧೆ ಇಲ್ಲದೇ ಅನಾರೋಗ್ಯ ಕಾರಣ ನೀಡಿ ವೈದ್ಯಕೀಯ ರಜೆ ಪಡೆದುಕೊಂಡಿದ್ದಾರೆ. ಅವರ ವೈದ್ಯಕೀಯ ಪ್ರಮಾಣಪತ್ರ ಪಡೆದುಕೊಂಡಿರುವ ತಾಪಂ ಇಓ ರಜೆ ಮಂಜೂರು ಮಾಡಿದ್ದಾರೆ. ಆದರೆ ವೈದ್ಯಕೀಯ ರಜೆ ಪಡೆದುಕೊಂಡಿರುವ ಪಿಡಿಓ ಈಗ ಭರ್ಜರಿ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದಾರೆ. ವೈದ್ಯಕೀಯ ರಜೆಯಲ್ಲಿರುವ ಅವರು ಈಗ ಉತ್ತರ ಪ್ರದೇಶದ ಪ್ರಯಾಗರಾಜ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಅಲ್ಲಿನ ಇನ್ನಿತರ ಕ್ಷೇತ್ರಗಳ ದರ್ಶನ ಪಡೆಯುತ್ತಿದ್ದಾರೆ. ಪಿಡಿಓ ಕೃಷ್ಣಪ್ಪ ನಡೆಯ ನಿಗೂಢವನ್ನು ತಾಪಂ ಮತ್ತು ಜಿಪಂ ಅಧಿಕಾರಿಗಳು ಅರಿಯದಿರುವುದು ಆಶ್ಚರ್ಯ ಮೂಡಿಸಿದೆ. ಕಳೆದ ಒಂದು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಪಿಡಿಓ ವೈದ್ಯಕೀರ ರಜೆ ಪಡೆದು ಮನೆಯಲ್ಲಿದ್ದಾರೆ. ಫೆ.೨೦ರವರೆಗೂ ವೈದ್ಯಕೀಯ ರಜೆ ಪಡೆದಿರುವ ಪಿಡಿಓ ಕಳೆದ ಮೂರು ನಾಲ್ಕು ದಿನಗಳಿಂದ ಗೆಳೆಯರೊಂದಿಗೆ ವಿವಿಧ ಕ್ಷೇತ್ರಗಳ ಪ್ರವಾಸದಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಗಂಭೀರ ಖಾಯಿಲೆಗಳಿದ್ದರೆ ಮಾತ್ರ ಅಧಿಕಾರಿಗಳು ಅಥವಾ ಸರಕಾರಿ ನೌಕರರು ವೈದ್ಯಕೀಯ ರಜೆ ಪಡೆಯುವ ಅವಕಾಶವಿದೆ. ಆದರೆ ಪಿಡಿಓ ಕೃಷ್ಣಪ್ಪ ಯಾವ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ಸ್ವತಃ ರಜೆ ಮಂಜೂರು ಮಾಡುವ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಗೊತ್ತಿಲ್ಲ. ಈ ಕುರಿತು ಅವರು ಸ್ಪಷ್ಟನೆ ನೀಡಿದ್ದು, ಪಿಡಿಓ ವೈದ್ಯಕೀಯ ರಜೆ ಪಡೆದುಕೊಂಡಿದ್ದಾರೆ. ಆದರೆ ಅವರು ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುತ್ತೇನೆ. ಅನಾರೋಗ್ಯದ ಕಾರಣ ನೀಡಿ ವೈದ್ಯಕೀಯ ಪ್ರಮಾಣ ಪತ್ರ ನೀಡಿ ರಜೆ ಮಂಜೂರು ಮಾಡಿಕೊಂಡು ಸ್ವ ಹಿತಾಶಕ್ತಿಗಾಗಿ ಪ್ರವಾಸ ಕೈಗೊಳ್ಳಲು ಬರುವುದಿಲ್ಲ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕ್ಕಾಗಿ ಜಿಪಂ ಸಿಇಓಗೆ ಮಾಹಿತಿ ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಗಂಗಾವತಿ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕಿರುವ ಕೆಲವು ಗ್ರಾಪಂ ಪಿಡಿಓಗಳು ಕೆಲಸ ಮಾಡದೇ ನುಣುಚಿಕೊಳ್ಳುತ್ತಿದ್ದು, ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಅನಾರೋಗ್ಯದ ಕಾರಣ ನೆಪ ಮಾಡಿಕೊಂಡು ಐಷಾರಾಮಿಯಾಗಿ ತಿರುಗಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಇಂತಹ ಪಿಡಿಓಗಳ ಬಗ್ಗೆ ನಿಗಾವಹಿಸಬೇಕಿರುವ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯೇ ಗೊತ್ತಿದ್ದರು ಮೌನಕ್ಕೆ ಶರಣಾಗಿರುವುದು ಗ್ರಾಮಾಭಿವೃದ್ಧಿ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡದೇ ಸುಳ್ಳು ಮೆಡಿಕಲ್ ರಜೆ ಹಾಕಿ ಮಜಾ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಬಾಕ್ಸ್
ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ
ಆನೆಗೊಂದಿ ಪಿಡಿಓ ಅನಾರೋಗ್ಯ ಕಾರಣ ನೀಡಿ ಮೆಡಿಕಲ್ ರಜೆ ಹಾಕಿದ್ದಾರೆ. ಮೆಡಿಕಲ್ ರಜೆ ಹಾಕಿದರೆ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿಯಲ್ಲಿರಬೇಕು. ಆದರೆ ಅನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಂಡಿರುವುದು ನಮಗೆ ಗೊತ್ತಿಲ್ಲ. ಒಂದುವೇಳೆ ಅವರು ಪ್ರವಾಸ ತೆರಳಬೇಕಾದರೂ ಪೂರ್ವಾನುಮತಿ ಪಡೆದುಕೊಂಡು ಹೋಗಬೇಕು. ಈ ಕುರಿತು ನಮಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಅವರ ಮೆಡಿಕಲ್ ರಜೆಯನ್ನು ಮತ್ತು ವೈದ್ಯಕೀಯ ಪ್ರಮಾಣಪತ್ರವನ್ನು ಪರಿಶೀಲಿಸಿ ಜಿಪಂ ಸಿಇಓ ಅವರಿಗೆ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ.
ಲಕ್ಷ್ಮೀದೇವಿ, ಕಾರ್ಯ ನಿರ್ವಾಹಕ ಅಧಿಕಾರಿ, ತಾಪಂ, ಗಂಗಾವತಿ.
