ಗಂಗಾವತಿ.
ಐತಿಹಾಸಿಕ ಹಂಪಿಯಷ್ಟೇ ಪ್ರಾಮುಖ್ಯತೆಯನ್ನು ಹೊಂದಿರುವ ರಾಮಾಯಣ ಕಾಲದ ಕಿಷ್ಕಿಂಧೆಯಾಗಿ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ, ವಿವಿಧ ಐತಿಹಾಸಿಕ, ಪುರಾಣ ಪ್ರಶಿದ್ಧ ಪುಣ್ಯಕ್ಷೇತ್ರಗಳನ್ನು ಹೊಂದಿರುವ ಮತ್ತು ಹಚ್ಚ ಹಸಿರಿನ ತುಂಗಭದ್ರಾ ನದಿಯ ದಡದಲ್ಲಿ ಜಿಲ್ಲೆಯ ಹೆಮ್ಮೆಯ ತಾಣವಾಗಿ ಗುರುತಿಸಿಕೊಂಡಿರುವ ಆನೆಗೊಂದಿ ಉತ್ಸವ ಆಚರಿಸುವಲ್ಲಿ ರಾಜ್ಯ ಸರಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಂಪೂರ್ಣ ನಿರ್ಲಕ್ಷವಹಿಸಿದ್ದಾರೆ ಎಂದು ತೀವ್ರವಾಗಿ ಖಂಡಿಸಿರುವ ಕನ್ನಡ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ತಕ್ಷಣ ಆನೆಗೊಂದಿ ಉತ್ಸವ ಆಚರಣೆಗೆ ಮುಂದಾಗದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಆನೆಗೊಂದಿ ರಾಮನ ಭಂಟನಾದ ಶ್ರೀ ಆಂಜನೇಯನು ಹುಟ್ಟಿದ ಜನ್ಮಸ್ಥಳವೆಂದೇ ವಿಶ್ವ ವಿಖ್ಯಾತ ಹೊಂದಿರುವ ಸ್ಥಳವಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಹಂಪಿಯಲ್ಲಿ ಅದ್ದೂರಿ ಉತ್ಸವ ಆಚರಣೆಯಾಗುತ್ತಿದ್ದು. ಆದರೆ ಅರಸರ ಮೊದಲು ರಾಜಧಾನಿ ಆನೆಗೊಂದಿಯಾಗಿತ್ತು. ವಿಜಯನಗರ ಅರಸರ ಕಾಲದಲ್ಲಿ ಶ್ರೀಕೃಷ್ಣ ದೇವರಾಯನು ಆನೆಗೊಂದಿ ಸ್ಥಳಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದರು. ಅದನ್ನು ವಿನಗರದ ತೊಟ್ಟಿಲು ಎಂದು ಕರೆಯುವ ಆನೆಗೊಂದಿಯ ವೈಭವವನ್ನು ಇಂದಿನ ಪಿಳಿಗೆಗೆ ಸಾಬೀತು ಮಾಡುವಲ್ಲಿ ಕಾಂಗ್ರೆಸ್ ಸರಕಾರ ಉತ್ಸವಕ್ಕೆ ಮೀನಾಮೇಷ ಮಾಡುತ್ತಿದೆ. ರಾಜಕೀಯ ಕಾರಣದಿಂದ ಆನೆಗೊಂದಿ ಉತ್ಸವ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿರ್ಲಕ್ಷ ಮಾಡುತ್ತಿದ್ದಾರೆ. ಸ್ವತಃ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಶಿವರಾಜ ತಂಗಡಗಿ ಜಿಲ್ಲೆಯ ಐತಿಹಾಸಿಕ ಕಾರ್ಯಕ್ರಮಗಳನ್ನು ಅತ್ಯಂತ ಅದ್ದೂರಿಯಾಗಿ ನಡೆಸಿ ಈ ಭಾಗವನ್ನು ರಾಜ್ಯ, ದೇಶಕ್ಕೆ ಪ್ರಚುರಪಡಿಸಬೇಕು. ಪಕ್ಕದ ಕನಕಗಿರಿ ಉತ್ಸವಕ್ಕೆ ತೋರುವ ಉತ್ಸಾಹ ಆನೆಗೊಂದಿ ಉತ್ಸವಕ್ಕೆ ತೋರದಿರುವುದು ಅತ್ಯಂತ ದುರಂತವಾಗಿದೆ. ಹಂಪಿಯ ಉತ್ಸವದೊಂದಿಗೆ ಆನೆಗೊಂದಿ ಉತ್ಸವವನ್ನು ಆಚರಿಸುವಂತೆ ಹಿಂದಿನ ಸರಕಾರ ಮತ್ತು ಅಂದು ಸಚಿವರಾಗಿದ್ದ ಎಂ.ಪಿ.ಪ್ರಕಾಶ ಅವರು ನಿರ್ಣಯ ಕೈಗೊಂಡಿದ್ದರು. ಮತ್ತು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಆನೆಗೊಂದಿ ಉತ್ಸವಕ್ಕೆ ರೂ.೨ ಕೋಟಿ ಅನುದಾನ ನಿಗದಪಡಿಸಿದ್ದಾರೆ. ಇಷ್ಟೇಲ್ಲ ಇದ್ದರೂ ಪ್ರಸ್ತುತ ಸರಕಾರ ಮತ್ತು ಸಚಿವರು ಆನೆಗೊಂದಿ ಉತ್ಸವ ಆಚರಿಸುವ ಕುರಿತು ಆಸಕ್ತಿವಹಿಸುತ್ತಿಲ್ಲ. ಕೇವಲ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಜನರ ಮುಂದೆ ಹೇಳಿಕೆ ನೀಡುವ ಸರಕಾರ ಮತ್ತು ಸಚಿವ ತಂಗಡಗಿ ಅವರು ಆನೆಗೊಂದಿಯ ಇತಿಹಾಸವನ್ನು ಬಿಂಬಿಸುವ ಕೆಲಸ ಮಾಡದೇ ನುಣುಚಿಕೊಳ್ಳುತ್ತಿದ್ದಾರೆ. ತಕ್ಷಣ ಆನೆಗೊಂದಿ ಉತ್ಸವ ಆಚರಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಾಕ್ಸ್:
ಆನೆಗೊಂದಿ ಉತ್ಸವ ಅನುದಾನಕ್ಕೆ ಒತ್ತಾಯಿಸಲಿ
ಕಳೆದ ವರ್ಷ ಆನೆಗೊಂದಿ ಉತ್ಸವ ಆಚರಿಸುವಂತೆ ಹೋರಾಟಗಾರರು, ಪತ್ರಕರ್ತರು ಅಗ್ರಹಿಸಿದ ಪರಿಣಾಮ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಲಿಸಿ ಆನೆಗೊಂದಿ ಉತ್ಸವ ಆಚರಿಸಿ ಕೈ ತೊಳೆದುಕೊಂಡರು. ಆದರೆ ಉತ್ಸವಕ್ಕೆ ಮಾಡಿರುವ ರೂ.೪ ಕೋಟಿ ಖರ್ಚಿನ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಇದರಿಂದ ಉತ್ಸವದ ಇವೆಂಟ್ ಮತ್ತಿತರ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಹಣ ಹಾಕಿ ಈಗ ಅನುದಾನಕ್ಕಾಗಿ ಭಕಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ವರ್ಷ ಶಾಸಕ ಜನಾರ್ಧನರೆಡ್ಡಿ ಕೆಆರ್‌ಪಿಪಿ ಪಕ್ಷದ ಶಾಸಕರಾಗಿ ಕಾಂಗ್ರೆಸ್ ಪಕ್ಷ ರಾಜ್ಯಸಭೆ ಚುನಾವಣೆಯಲ್ಲಿ ಸಹಕಾರ ಮಾಡಿದ್ದರಿಂದ ಸಚಿವ ತಂಗಡಗಿ ಸಂಪೂರ್ಣ ಸಾತ್ ನೀಡಿದ್ದರು. ಆದರೆ ನಂತರ ರೆಡ್ಡಿ ಬಿಜೆಪಿ ಸೇರುತ್ತಿದ್ದಂತೆ ತಂಗಡಗಿ ಅವರು ಅವರೊಂದಿಗೆ ಮುನಿಸಿಕೊಂಡರು. ಮತ್ತು ಶಾಸಕ ರೆಡ್ಡಿ ಅವರು ನಿಗದಿಪಡಿಸಿದಕ್ಕಿಂತಲು ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ನಮಗೆ ಅನುದಾನ ಬಿಡುಗಡೆ ಕೊರತೆಯಾಗಿದೆ ಎಂದು ತಂಗಡಗಿ ಸ್ಪಷ್ಟಪಡಿಸಿದ್ದರು. ಸಚಿವ, ಶಾಸಕರ ಮುನಿಸಿನಿಂದ ಈಗ ಆನೆಗೊಂದಿ ಉತ್ಸವಕ್ಕೆ ಹಣ ಖರ್ಚು ಮಾಡಿಕೊಂಡವರು ಮೈ ಪರಿಚಿಕೊಳ್ಳುತ್ತಿದ್ದಾರೆ. ಕನ್ನಡಪರ ಸಂಘಟನೆ ಹೋರಾಟಗಾರರು ಕೇವಲ ಉತ್ಸವ ಆಚರಿಸಿ ಎಂದು ಒತ್ತಾಯಿಸುವುದಕ್ಕಿಂತ ಕಳೆದ ವರ್ಷ ಖರ್ಚು ಮಾಡಿರುವ ಅನುದಾನ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಬೇಕಿದೆ. ಹಣ ಕಳೆದುಕೊಂಡವರು ಕನ್ನಡಿಗರು ಎಂಬುದು ಹೊರಾಟಗಾರರಿಗೆ ತಿಳಿಯಬೇಕು. ಮೊದಲು ಕಳೆದ ವರ್ಷದ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಂತರ ಮತ್ತೆ ಉತ್ಸವ ಆಚರಿಸಲು ಅಗ್ರಹಿಸಿದರೆ ಉತ್ತಮ ಎಂಬ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!