ಸಮರ್ಥವಾಣಿ ವಾರ್ತೆ ಕೊಪ್ಪಳ,ಮಾ.2: ಸಮೀಪದ ಹಾಲವರ್ತಿ ಗ್ರಾಮದಲ್ಲಿ ಸ್ಥಾಪನೆ ಆಗುತ್ತಿರುವ ಬಿ.ಎಸ್.ಪಿ.ಎಲ್. ಉಕ್ಕು ಕಾರ್ಖಾನೆ ಬಗೆಗಿನ ಜನಾಭಿಪ್ರಾಯದ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವುದು ಕರ್ನಾಟಕ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.
ಇಂದು ಕೊಪ್ಪಳಕ್ಕೆ ಆಗಮಿಸಿದ್ದ ಸಚಿವ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿ.ಎಸ್.ಪಿ.ಎಲ್. ಕಾರ್ಖಾನೆ ಸ್ಥಾಪನೆ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ತಿಳಿಸಿದರು. ಕೈಗಾರಿಕೆಗಳು ಸ್ಥಾಪನೆಯಿಂದ ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕುತ್ತದೆ ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿ.ಎಸ್.ಪಿ.ಎಲ್. ಪ್ರಾರಂಭದಿಂದ ಜನಜೀವನ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶಿಲಿಸುವ ಜವಾಬ್ದಾರಿ
ರಾಜ್ಯ ಸರ್ಕಾರದ್ದಾಗಿದೆ. ಈ ಕಾರ್ಖಾನೆ ಸ್ಥಾಪನೆ ಕುರಿತಂತೆ ರಾಜ್ಯ ಸರ್ಕಾರವು ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಕಾರ್ಖಾನೆ ಸ್ಥಾಪನೆ ಕುರಿತಂತೆ ತಮ್ಮ ಮುಂದೆ ಯಾವುದೇ ಪ್ರಸ್ತಾಪ ಸಲ್ಲಿಕೆ ಆಗಿಲ್ಲ. ಗವಿಶ್ರೀಗಳ ನೇತೃತ್ವದಲ್ಲಿ ಕಾರ್ಖಾನೆ ಬಗ್ಗೆ ವಿರೋಧ ವ್ಯಕ್ತವಾಗಿದೆ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದ ಜನಜೀವನದ ಮೇಲೆ ಯಾವುದೇ ದುಷ್ಪರಿಣಾಮ ಆಗದಂತೆ ಕಾರ್ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಹಾರಿಕೆ ಉತ್ತರ ನೀಡುವ ಮೂಲಕ ಬಿ.ಎಸ್.ಪಿ.ಎಲ್. ಸ್ಥಾಪನೆಯನ್ನು ತಡೆಯುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಯನ್ನು ತಳ್ಳಿ ಹಾಕಿದರು.
ಮುಂದುವರೆದು ಮಾತನಾಡಿದ ಅವರು, ಕೊಪ್ಪಳದಲ್ಲಿ ಸ್ಥಾಪನೆಯಾಗಿರುವ ಕೊಪ್ಪಳ ಟೈಕ್ಲಸ್ಟರ್ ಉದ್ಯಮದಲ್ಲಿ ಈಗಾಗಲೇ ರೂ.500 ಕೋಟಿ ಹೂಡಿಕೆಯಾಗಿದೆ. ಆಟಿಕೆಗಳ ಉತ್ಪಾದನೆಯಲ್ಲಿ ಚೈನಾಕ್ಕೆ ತೀವ್ರ ಸ್ವರೂಪದ ಸ್ಪರ್ಧೆ ನೀಡುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಂಬತ್ತು ಕಡೆಗಳಲ್ಲಿ ಟೈಕ್ಲಸ್ಟರ್ ಗೋಳನ್ನು ಸ್ಥಾಪಿಸಲಾಗಿದೆ. ಪ್ರಧಾನಿ ನರೇಂಂದ್ರ ಮೋದಿ ಅವರ ಕಲ್ಪಿಸಲಾಗಿದ್ದು, ಪೂರ್ಣ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ್, ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್, ಮುಂತಾದವರು ಇದ್ದರು.
