ಗಂಗಾವತಿ.
ನಗರದಲ್ಲಿ ಮಾ.27 ಮತ್ತು 28 ರಂದು ಎರಡು ದಿನಗಳ ಕಾಲ ಆಯೋಜಿಸಿರುವ 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ತಿಳಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಸೋಮವಾರ ಕೊಪ್ಪಳ ನಗರದ ಗಾಣಿಗೇರ ಸಮುದಾಯದಲ್ಲಿ ನಡೆದ ಕಸಾಪ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾಹಿತ್ಯಕ, ಸಾಂಸ್ಕೃತಿಕ ವಲಯದಲ್ಲಿ ಸೇವೆ ಸಲ್ಲಿಸಿದ ಹಲವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡುವಂತೆ ಶಿಫಾರಸ್ಸು ಬಂದಿದ್ದವು. ಈ ಕುರಿತು ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿದ ನಂತರ ಲಿಂಗಾರೆಡ್ಡಿ ಆಲೂರು ಅವರನ್ನು ಅಂತಿಮವಾಗಿ ಸರ್ವಾಧ್ಯಕ್ಷರನ್ನಾಗಿ ಒಪ್ಪಿಗೆ ಸೂಚಿಸಲಾಯಿತು. ಗಂಗಾವತಿ ಶಾಸಕರು ಅಧಿವೇಶನದಿಂದ ಬಂದ ನಂತರ ಆಲೂರ ಅವರ ಮನೆಗೆ ತೆರಳಿ ಅಧಿಕೃತವಾಗಿ ಅಹ್ವಾನ ನೀಡಲಾಗುವುದು ಎಂದು ಶರಣೇಗೌಡ ತಿಳಿಸಿದ್ದಾರೆ.
ಪ್ರಾಧ್ಯಾಪಕರಿಗೆ, ಸಾಹಿತಿಯಾಗಿ, ಕೃಷಿ ಮತ್ತು ಸಾಹಿತ್ಯಕ ಪತ್ರಿಕೆಯ ಸಂಪಾದಕರಾಗಿ, ವಿವಿಧ ವೇದಿಕೆಗಳಲ್ಲಿ ಅಚ್ಚುಕಟ್ಟು ನಿರ್ವಹಣೆ ಮಾಡುವಲ್ಲಿ ಖ್ಯಾತಿ ಹೊಂದಿರುವ ಲಿಂಗಾರೆಡ್ಡಿ ಆಲೂರು ಅವರು ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದವರಾಗಿದ್ದು, ಪ್ರಸ್ತುತ ನಗರದ ಗಣೇಶ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಮತ್ತು ತಾಲೂಕಿನ ಕೆಸರಹಟ್ಟಿ ಗ್ರಾಮದ ಜಿಜಿಡಿಇ ಶಿಕ್ಷಣ ಟ್ರಸ್ಟ್‌ನ ಶೈಕ್ಷಣಿಕ ವಿಭಾಗದ ಆಡಳಿತಾಧಿಕಾರಿಯಾಗಿ ಕಳೆದ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಲ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಗಂಗಾವತಿಯ ಕೊಟ್ಟೂರೇಶ್ವರ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣ, ಶ್ರೀರಾಮುಲು ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ, ಟಿಎಂಎಇ ಮಹಾವಿದ್ಯಾಲಯದಲ್ಲಿ ಬಿಎಡ್ ಪದವಿ ನಂತರ ಶಿವಮೊಗ್ಗ ಕುವೆಂಪು ವಿವಿಯಲ್ಲಿ ಎಂಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ವಿವಿಧ ಶಿಕ್ಷಣದ ನಂತರ ಕಾರಟಗಿ ನಗರದ ಶರಣಬಸವೇಶ್ವರ ಪ್ರೌಢಶಾಲೆ, ಕನ್ನಡ ಶಿಕ್ಷಕ, ಸಿಎಂಎನ್ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ, ರೆಡ್ಡಿ ವೀರಣ್ಣ ಸಂಜೀವಪ್ಪ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಾಲೆ ಮತ್ತು ಕಾಲೇಜ್ ವಿಭಾಗದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕೆಸರಟ್ಟಿಯ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ತಮ್ಮ 33 ವರ್ಷದ ಸುದೀರ್ಘ ಸೇವೆಯನ್ನು ಶಿಕ್ಷಣಕ್ಕಾಗಿ ಮಿಸಲಿಟ್ಟಿದ್ದಾರೆ.
ತಮ್ಮ ಶಿಕ್ಷಕ ಮತ್ತು ಉಪನ್ಯಾಸಕ ವೃತ್ತಿಯ ಜೊತೆಗೆ ಸಾವಯವ ಸಂಪದ, ಕೃಷಿ ಸುದ್ದಿ ಮತ್ತು ರೆಡ್ಡಿ ಬಳಗ ಎಂಬ ಮಾಸ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದ್ದಾರೆ. ಜೊತೆಗೆ ವಿವಿಧ ಪತ್ರಿಕೆಯಲ್ಲಿ ಅಂಕಣಕಾರರಾಗಿ, ಕಥಾ ಸಂಕಲನವನ್ನು ಹೊರ ತಂದಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಕೃಷಿ, ಶಿಕ್ಷಣ, ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಿರ್ವಹಿಸಿರುವ ಅನುಭವ ಹೊಂದಿರುವ ಲಿಂಗಾರೆಡ್ಡಿ ಆಲೂರು ಅವರು ಉತ್ತಮ ವಾಗ್ಮಿಯಾಗಿ ಗಂಗಾವತಿಯಲ್ಲಿ ನಡೆಯುವ ಪ್ರತಿಯೊಂದು ಸಾಹಿತ್ಯ, ಸಾಂಸ್ಕೃತಿಕ ಮತ್ತಿತರ ಸಂಘ, ಸಂಸ್ಥೆಗಳ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಜನಮಾಸದಲ್ಲಿ ಗುರುತಿಸಿಕೊಂಡಿದ್ದಾರೆ. ಗಂಗಾವತಿ ತಾಲೂಕು ಕಸಾಪ ಅಧ್ಯಕ್ಷರಾಗಿ ಕಸಾಪವನ್ನು ಕಟ್ಟುವಲ್ಲಿ ಕೆಲಸ ಮಾಡಿರುವ ಅವರು ಈ ಹಿಂದೆ ನವಲಿಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕಸಾಪಕ್ಕೆ ಯಾರೇ ಪದಾಧಿಕಾರಿಗಳಾದರೂ ಲಿಂಗಾರೆಡ್ಡಿ ಆಲೂರು ತಾವು ಯಾವುದೇ ಹುದ್ದೆಗೆ ಆಸೆ ಪಡದೇ ಕಸಾಪಕ್ಕೆ ಟೊಂಕಕಟ್ಟಿ ನಿಂತು ಕನ್ನಡ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅವರ ಈ ಹತ್ತಾರು ಕಾರ್ಯಗಳನ್ನು ಗುರುತಿಸಿರುವ ಪ್ರಸ್ತುತ ಕಸಾಪ ಜಿಲ್ಲಾ ಘಟಕ ಗಂಗಾವತಿಯಲ್ಲಿ ಆಯೋಜಿಸಿರುವ ೧೩ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಲಿಂಗಾರೆಡ್ಡಿ ಆಲೂರು ಅವರು ಆಯ್ಕೆಗೆ ಗಂಗಾವತಿ ಸೇರಿದಂತೆ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ, ಸಂಸ್ಥೆಗಳು, ಶಾಸಕರು, ಗಣ್ಯರು ಸ್ವಾಗತಿಸಿ ಅಭಿನಂದಿಸಿದ್ದಾರೆ.
ಬಾಕ್ಸ್:
ಅಚ್ಚುಕಟ್ಟು ಸಮ್ಮೇಳನಕ್ಕೆ ಸರ್ವರ ಸಹಕಾರ ಅಗತ್ಯ
ನಗರದಲ್ಲಿ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ತಿರ್ಮಾನ ಕೈಗೊಂಡ ನಂತರ ಈಗಾಗಲೇ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಕಚೇರಿ ಮತ್ತು ಲಾಂಛವವನ್ನು ಬಿಡುಗಡೆ ಮಾಡಿ, ಸಮ್ಮೇಳನ ಸಿದ್ಧತೆಗೆ ಸೂಚನೆ ನೀಡಿದ್ದಾರೆ. ಅದೇ ರೀತಿ ಕಸಾಪ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸಮ್ಮೇಳನ ಸಿದ್ಧತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ಮತ್ತು ಲಿಂಗಾರೆಡ್ಡಿ ಆಲೂರು ಅವರನ್ನು ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಸಮ್ಮೇಳನ ಯಶಸ್ವಿಗೆ ಸರ್ವರು ಕೈ ಜೋಡಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!