ಕೊಪ್ಪಳ.
ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸೇರಿದಂತೆ ಹಲವು ಕರ್ತವ್ಯ ಲೋಪದಿಂದಾಗಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ.ಕೆ ಅವರನ್ನು ಅಮಾನತ್ತು ಮಾಡಲಾಗಿದೆ.
ಗುರುವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಅಮಾನತ್ತು ಮಾಡಿ ಆದೇಶಿಸಿದ್ದಾರೆ. ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ಪ ಕೆ ಅವರು ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ಹಾಗೂ ಗ್ರಾಮಗಳಲ್ಲಿನ ಕುಂದುಕೊರತೆಗಳ ಬಗ್ಗೆ ಸಾರ್ವಜನಿಕರಿಗೆ ನೀಡದಿರುವುದು. ಹಾಗೂ ಸಾರ್ವಜನಿಕರು ಗ್ರಾಪಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯದಲ್ಲಿ ಇಲ್ಲದಿರುವುದರ ಬಗ್ಗೆ ಸಾರ್ವಜನಿಕರ ದೂರುಗಳ್ಳನ್ನು ಪರಿಗಣಿಸಿ ಕಾರಣಕೇಳಿ ನೋಟೀಸ್ ಜಾರಿಗೊಳಿಸಿದಾಗ್ಯೂ ಸೂಕ್ತ ಕಾರಣಗಳನ್ನು ಪಿಡಿಓ ಕೃಷ್ಣಪ್ಪ ನೀಡಿಲ್ಲ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಕೆ-2 ತಂತ್ರಾಂಶದ ಮೂಲಕ ಪ್ರೋತ್ಸಾಹ ಧನ ಪಾವತಿಸಲು ವಿಳಂಬ ಮಾಡಿರುವುದು. ೨೦೨೪ ಸೆಪ್ಟೆಂಬರ್ ೦೬ರಂದು ಜಿಲ್ಲಾ ಪಂಚಾಯಿತಿ ಸಮಿತಿ ಕೊಠಡಿಯಲ್ಲಿ ದಾಖಲೀಕರಣ ಮಾಡಲು ಆಯ್ದ ಗಣಕಯಂತ್ರ ನಿರ್ವಾಹಕರನ್ನು ಅಗತ್ಯ ದಾಖಲೆಗಳೊಂದಿಗೆ ಹಾಗೂ ಲ್ಯಾಪ್‌ಟಾಪ್‌ನೊಂದಿಗೆ ಹಾಜರಾಗಲು ಸೂಚಿಸಿದಾಗಲೂ ಕೂಡ ಸದರಿ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ ಕರ್ತವ್ಯಲೋಪ ಎಸಗಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಫಲರಾಗಿ ಕರ್ತವ್ಯಲೋಪ ಎಸಗಿರುವುದು. ಪ್ರವಾಸೋದ್ಯಮ ಇಲಾಖೆಗೆ ಒಂದು ಕೊಠಡಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಸಕಾಲದಲ್ಲಿ ಕೊಠಡಿ ಒದಗಿಸದೇ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ಆನೆಗೊಂದಿ ನವವೃಂದಾವನಗಡ್ಡೆಗೆ ತೆರಳುವ ಯಾತ್ರಿಕನಾವೆಯ ಅಲ್ಪಾವಧಿ ಟೆಂಡರ್‍ನ್ನು ಅಂತಿಮಗೊಳಿಸದೇ ಇರುವ ಹಿನ್ನಲೆಯಲ್ಲಿ ಟಿ.ಎಸ್.ಗೋಪಿಕೃಷ್ಣ ಎಂಬುವವರು ಧಾರವಾಡದ ಘನ ಉಚ್ಛ ನ್ಯಾಯಾಲಯದಲ್ಲಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು 2024ರ ನವೆಂಬರ್ 11ರಂದು ಅಂತಿಮ ತೀರ್ಪು ನೀಡಿತ್ತು. ಸದರಿ ತೀರ್ಪಿನ ಆದೇಶದಂತೆ ನಿಯಮಾನುಸಾರ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಇನ್ನಿತರ ಹಲವು ವಿಷಯಗಳಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ ತೊರಿರಿವುದನ್ನು ಪರಿಗಣಿಸಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10 (೧)(ಡಿ) ಅನ್ವಯ ಮತ್ತು ಮುಂದಿನ ಆದೇಶ ಬರುವವರೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಬಾಕ್ಸ್:
ವೈದ್ಯಕೀಯ ರಜೆ ಪಡೆದು ಕುಂಭಮೇಳಕ್ಕೆ ಪ್ರಯಾಣ..!!
ಗ್ರಾಮ ಪಂಚಾಯತ್‌ನಲ್ಲಿ ತಮಗೆ ನೀಡಿರುವ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದನ್ನು ಮತ್ತು ಸಾರ್ವಜನಿಕರ ದೂರನ್ನು ಪರಿಗಣಿಸಿ ಆನೆಗೊಂದಿ ಪಿಡಿಓ ಕೃಷ್ಣಪ್ಪ ಅವರನ್ನು ಜಿಪಂ ಸಿಇಓ ಅಮಾನತ್ತುಗೊಳಿಸಿದ್ದಾರೆ. ಪಿಡಿಓ ಕೃಷ್ಣಪ್ಪ ಅವರು ಆರೋಗ್ಯ ಸಮಸ್ಯೆಯಾಗಿದೆ ಎಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿ ಒಂದು ತಿಂಗಳ ಕಾಲ ವೈದ್ಯಕೀಯ ರಜೆಯನ್ನು ಮಂಜೂರು ಮಾಡಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಪ್ರಯಾಣ ಹೋಗಿದ್ದರು. ವೈದ್ಯಕೀಯ ರಜೆ ಪಡೆದು ಕುಂಭಮೇಳಕ್ಕೆ ಹೋಗಿರುವ ಕುರಿತು ಸಮರ್ಥವಾಣಿಯಲ್ಲಿ ವರದಿ ಬಿತ್ತರಿಸಿರುವುದು ಪಿಡಿಓ ಕೃಷ್ಣಪ್ಪ ಕರ್ತವ್ಯ ಲೋಪದ ಮತ್ತೊಂದು ಪ್ರಕರಣವಾಗಿದೆ.
