ವೆಂಕಟೇಶ ಕುಲಕರ್ಣಿ
ಕೊಪ್ಪಳ
ಜಿಲ್ಲೆಯ ಕುಷ್ಟಗಿ ತಾಲೂಕಿನ ವ್ಯಾಪ್ತಿಯಲ್ಲಿ ತಲೆ ಎತ್ತಿರುವ 15ಕ್ಕೂ ಹೆಚ್ಚು ವಿಂಡ್ ಪವರ್ ಕಂಪನಿಗಳ ವಾಹನಗಳ ಸಂಚಾರದಿಂದ ತಾಲೂಕಿನ ಹಲವು ರಸ್ತೆಗಳು ಹಾಳಾಗುತ್ತಿವೆ. ಇದರಿಂದ ರೈತರಿಗೂ ಮತ್ತು ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಒತ್ತಾಯಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ಸಚಿವರು ನೀಡಿರುವ ಉತ್ತರಕ್ಕೆ ಸಮಾಧಾನಗೊಳ್ಳದೇ ವಿಂಡ್ ಪವರ್ ಕಂಪನಿಗಳಿಂದ ಆಗುತ್ತಿರುವ ಸಮಸ್ಯೆಯನ್ನು ಬಿಚ್ಚಿಟ್ಟರು. ಕುಷ್ಟಗಿ ತಾಲೂಕಿನ ಗ್ರಾಮಗಳ ರಸ್ತೆಗಳು ಕೇವಲ 15 ಟನ್ ವಾಹನಗಳ ಸಂಚಾರಕ್ಕೆ ಮಾತ್ರ ಸಿಮೀತವಾಗಿವೆ. ಆದರೆ ವಿಂಡ್ ಪವರ್ ಕಂಪನಿಗಳು ಹೊತ್ತು ತರುವ ಬೃಹತ್ ಆಕಾರದ ಯಂತ್ರೋಪಕರಣಗಳು ಸುಮಾರು 45ಕ್ಕೂ ಹೆಚ್ಚು ಟನ್ ಭಾರ ಹೊಂದಿರುತ್ತವೆ. ಇದಕ್ಕೆ ಅಲ್ಲಿನ ರೈತರು ಆಕ್ಷೇಪಣೆ ಸಲ್ಲಿಸಿದರೆ ಸ್ಥಳೀಯ ಪೊಲೀಸರು ಕಂಪನಿಗಳ ವಾಹನ ವಿರುದ್ಧ ಕ್ರಮ ಕೈಗೊಳ್ಳದೇ ನೇರವಾಗಿ ದೂರು ನೀಡುವ ರೈತರ ವಿರುದ್ಧವೇ ಹರಿ ಹಾಯುತ್ತಾರೆ. ಅಂದೆ ಸರಕಾರ ರೈತರ ಪರವಾಗಿದೆಯೋ ಅಥವಾ ಕಂಪನಿಗಳ ಪರವಾಗಿದೆಯೋ ಎಂಬುದು ಸ್ಪಷ್ಟಪಡಿಸಬೇಕು. ಈ ಕುರಿತು ಈಗಾಗಲೇ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ವಿಂಡ್ ಪವರ ಕಂಪನಿಗಳು ಸ್ಥಳೀಯ ಗ್ರಾಮ ಪಂಚಾಯತ್‌ನ ಪರವಾನಿಗೆಯನ್ನು ಪಡೆದಿರುವುದಿಲ್ಲ. ನೇರವಾಗಿ ಕಂಪನಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿವೆ. ಇದರಿಂದ ನಮ್ಮ ತಾಲೂಕಿನಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ. ತಕ್ಷಣ ಈ ಕುರಿತು ಸಂಬಂಧಿಸಿದ ಇಂಧನ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಂಡ್ ಪವರ್‌ಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ನಮಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ವಿಧಾನಸಭಾಧ್ಯಕ್ಷರ ಮೂಲಕ ಸರಕಾರವನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 9880120038 / 9901195019
error: Content is protected !!