ಗಂಗಾವತಿ.
ನಗರಸಭೆ ಪೌರಾಯುಕ್ತ ಆರ್.ವಿರುಪಾಕ್ಷಮೂರ್ತಿ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮಾಲಾಶ್ರೀ ಅವರ ಪತಿ ಸಂದೀಪ್ ಅವಾಚ್ಚ್ ಶಬ್ಧಗಳಿಂದ ನಿಂದಿಸಿದ್ದು, ತಕ್ಷಣ ಸಂದೀಪನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಪೊಲೀಸ್ ಠಾಣೆಗೆ ದೂರು ನೀಡಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ರಾತ್ರಿ ನಿಂದನೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ವಿಷಯ ತಿಳಿದ ಪೌರಾಯುಕ್ತ ವಿರುಪಾಕ್ಷಮೂರ್ತಿ ತಮ್ಮ ನಗರಸಭೆಯ ಸಿಬ್ಬಂದಿಯೊಂದಿಗೆ ಚರ್ಚಿಸಿ ಶುಕ್ರವಾರ ಬೆಳಗ್ಗೆ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ನಂತರ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಪೌರಾಯುಕ್ತರನ್ನು ಅವಾಚ್ಚ್ ಶಬ್ಧಗಳಿಂದ ನಿಂದನೆ ಮಾಡಿರುವ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮಾಲಾಶ್ರೀ ಅವರ ಪತಿ ಸಂದೀಪನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ನೈತಿಕ ಬೆಂಬಲ ನೀಡಿದ್ದಾರೆ. ಈ ಕುರಿತು ಪೌರಾಯುಕ್ತ ವಿರುಪಾಕ್ಷಮೂರ್ತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಸದಸ್ಯೆಯ ಪತಿ ಸಂದೀಪ ನನ್ನ ಬಗ್ಗೆ ಮತ್ತು ನನ್ನ ಕುಟುಂಬಸ್ಥರನ್ನು ಅವಾಚ್ಚ್ ಶಬ್ಧಗಳಿಂದ ನಿಂದಿಸಿ ಮಾತನಾಡಿದ್ದಾನೆ. ಮಾತನಾಡಿರುವ ಧ್ವನಿಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ನೋವ್ವಾಗಿದೆ. ಹೀಗಾಗಿ ನಿಂದನೆ ಮಾಡಿರುವ ಸಂದೀಪನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ದೂರು ಸಲ್ಲಿಸಿದ್ದೇನೆ ಎಂದರು. ಪ್ರತಿಭಟನೆಯಲ್ಲಿ ನಗರಸಭೆ ಎಇಇ ಶಂಕರಗೌಡ, ನೈರ್ಮಲ್ಯ ಅಭಿಯಂತರ ಚೇತನ, ಆರೋಗ್ಯ ನಿರೀಕ್ಷಕ ನಾಗರಾಜ ಸೇರಿದಂತೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು ಇದ್ದರು.
ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಸದಸ್ಯರಾದ ವಾಸು ನವಲಿ, ಉಸ್ಮಾನ್ ಬಿಚ್ಚಗತ್ತಿ, ಮುಖಂಡರಾದ ಅಲ್ತಾಪ್ ಬಿಚ್ಚಗತ್ತಿ, ಶಿವಕುಮಾರ ಚಲುವಾದಿ ಮತ್ತಿತರು ಪೌರಾಯುಕ್ತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಮತ್ತು ನಿಂದನೆ ಮಾಡಿರುವುದನ್ನು ಖಂಡಿಸಿದರು.
